ಮಾನನಷ್ಟ		
ವ್ಯಕ್ತಿಯ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆಯುಂಟಾಗಿ ಸಮಾಜದ ದೃಷ್ಟಿಯಲ್ಲಿ ಆತ ಕೀಳೆನಿಸುವ ಒಂದು ಕ್ರಿಯೆಗೆ ಮಾನನಷ್ಟ ಎನ್ನಬಹುದು. ಮಾನ ಎಂಬುದು ಸಮಾಜದಲ್ಲಿ ರೂಢಿಸಿಕೊಂಡು ಬಂದಿರುವ ಒಂದು ಪ್ರಚಲಿತ ಅಭಿಪ್ರಾಯ. ಈ ಅಭಿಪ್ರಾಯ ವ್ಯಕ್ತಿಯ ಗುಣ ನಡತೆಗಳ ಮೇಲೆ ಅವಲಂಬಿತ. ಸಮಾಜದ ದೃಷ್ಟಿಯಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಇರುವ ಒಂದು ಗುಣವಿಶೇಷ; ಮಾನವಂತ ಮಾನಹೀನ ಇತ್ಯಾದಿ. ಇಲ್ಲಿಯ ತುಲನೆ ವ್ಯಕ್ತಿಗಳನ್ನು ಅವಲಂಬಿಸಿದ್ದು. ಇದು ಒಂದು ಕಲ್ಪನೆ ಅಥವಾ ಭಾವನೆ ಎನ್ನಬಹುದು. ಒಬ್ಬ ವ್ಯಕ್ತಿಯನ್ನು ಕುರಿತ ಅವನ ಬಗ್ಗೆ ಹೆಚ್ಚು ಅರಿವುಳ್ಳ ಮಂದಿಯಲ್ಲಿ ಮೂಡುವ ವ್ಯಕ್ತಿಗಳ ಭಾವನೆ ಸದಾ ಒಂದೇ ಬಗೆಯಾಗಿರುವುದಿಲ್ಲ. ಈ ಗೌರವದ ಭಾವನೆ ಹೆಚ್ಚಾಗುತ್ತ, ಕಡಿಮೆಯಾಗುತ್ತ ಒಟ್ಟಿನಲ್ಲಿ ಬದಲಾಗುತ್ತ ಹೋಗುವುದು ಒಂದು ವಿಶೇಷ. ಅಂದರೆ ಈ ಸಾಮಾಜಿಕ ಮತ್ತು ವ್ಯಕ್ತಿಗತ ಭಾವನೆ ಸ್ಥಿರವಾದುದಲ್ಲ. ಈ ಬಗೆಯ ಕಲ್ಪಿತ ಮಾನ ಭಾವನೆ ಸಮಾಜದಲ್ಲಿ ವ್ಯಕ್ತಿಗೆ ಪ್ರತಿಷ್ಠೆ, ಗೌರವ ತಂದು ಬಾಳಿನಲ್ಲಿ ನೆಮ್ಮದಿಯುಂಟುಮಾಡುತ್ತದೆ. ಇದಕ್ಕೆ ಧಕ್ಕೆ ತಂದು ನೋವುಂಟುಮಾಡುವ ಪ್ರಸಂಗಗಳುಂಟಾಗಿ ವ್ಯಕ್ತಿ ಮಾನವಿಲ್ಲದವನೆಂದು ಸಮಾಜ ಹಂಗಿಸಬಹುದು. ಈ ಬಗೆಯ ಮಾನನಷ್ಟ (ಡೆಫಮೇಷನ್) ನಾನಾ ಬಗೆಯಲ್ಲಿ, ಸ್ತರಗಳಲ್ಲುಂಟಾಗಬಹುದು. ಮಾನಹಾನಿಗೆ ಗುರಿಯಾದ ವ್ಯಕ್ತಿ ಸಾಮಾಜಿಕ ವರ್ತನೆಗೆ ಗುರಿಯಾಗಿ ಸಾಕಷ್ಟು ಆರ್ಥಿಕ ಹಾನಿಗೊಳಗಾಗಬಹುದು ಮತ್ತು ವ್ಯಕ್ತಿ ಸಾತಂತ್ರ್ಯದ ಮೂಲಭೂತ ಹಕ್ಕಿಗೂ ಇದು ಚ್ಯುತಿ ತರುತ್ತದೆ. ಆದ್ದರಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಇರುವ ಗೌರವ, ಪ್ರತಿಷ್ಠೆ ಇವುಗಳ ಹಕ್ಕನ್ನು ನ್ಯಾಯ ಪದ್ಧತಿಗಳು ಮನ್ನಿಸಿವೆ. ಪರನಿಂದೆ ಅನೀತಿಯುತವೆಂದು ಧರ್ಮಗಳು ಸಾರಿವೆ. ನಾಗರಿಕ ಸಮಾಜ ನ್ಯಾಯಪದ್ಧತಿಯಲ್ಲಿ ಮಾನ ಹಾನಿಯಂಥ ತೇಜೋವಧೆಯ ಕೃತ್ಯಗಳನ್ನು ಅಪರಾಧಗಳೆಂದು ಪರಿಗಣಿಸಿ ಅಪರಾಧಿಗೆ ಶಿಕ್ಷೆ ವಿಧಿಸಲು ಮತ್ತು ಅಪಮಾನಿತನಿಗೆ ಪರಿಹಾರ ದೊರಕಿಸಲು ಯುಕ್ತ ಕ್ರಮಗಳಿವೆ.

ಪ್ರಾಚೀನ ಭಾರತದಲ್ಲಿ ಮಾನಹಾನಿಯನ್ನು ವಾಕ್ಪರುಷ್ಯ ಅಪರಾಧವೆಂದು ಗುರುತಿಸುತ್ತಿದ್ದರು. ಕಾತ್ಯಾಯನನ ಹೇಳಿಕೆ ಪ್ರಕಾರ ಒಬ್ಬ ಇನ್ನೊಬ್ಬನನ್ನು ನಿಂದಿಸಿ ಜನಸಾಮಾನ್ಯರ ತಿಳಿವಳಿಕೆಯಲ್ಲಿ ಖಂಡನೆಗೆ ಗುರಿಪಡಿಸಿದರೆ ವಾಕ್ಪುರುಷ್ಯ ಅಪರಾಧಮಾಡಿದಂತೆ. ವಾಕ್‍ನ ಮೂಲಕ ಪರುಷ್ಯ ಎಂದರೆ ಕೆಡುಕಾದ ವರ್ತನೆಯನ್ನುಂಟು ಮಾಡುವುದೇ ಮಾನಹಾನಿ ಅಪರಾಧ. ಮನುಸ್ಮøತಿ ಪ್ರಕಾರ ವಾಕ್ಪುರುಷ್ಯ ಪಾಪಪೂರಿತ ಮಾನಸಿಕ ಕ್ರಿಯೆ ಕೆಟ್ಟ ಶಬ್ದಗಳಲ್ಲಿ ನಾಲ್ಕು ಬಗೆಯಲ್ಲಿ ಅಭಿವ್ಯಕ್ತವಾಗುವುದು. ಅವು ಬಯ್ಗುಳದಿಂದ ಇನ್ನೊಬ್ಬನನ್ನು ನಿಂದಿಸುವುದು, ಒಂದು ವರ್ಗವನ್ನು ನಿಂದಿಸಿ ನಿಷ್ಠುರಕ್ಕೆ ಗುರಿಮಾಡುವುದು, ಅಶ್ಲೀಲ ನುಡಿಗಳಿಂದ ಇನ್ನೊಬ್ಬರನ್ನು ಅಥವಾ ಹೆಂಗಸರನ್ನು ದೂಷಿಸುವುದು ಮತ್ತು ತೀವ್ರ ದೋಷಗಳ ಅಥವಾ ಮಹಾಪಾತಕಗಳ ಆರೋಪಣೆ ಹೊರಿಸುವುದು. ಯಾಜ್ಚವಲ್ಕ್ಯನ ಪ್ರಕಾರ ಅಂಗಹೀನರನ್ನು ಮತ್ತು ರೋಗಿಗಳನ್ನು ವ್ಯಂಗ್ಯ ಮಾತುಗಳಿಂದ ಹಾಸ್ಯ ಮಾಡುವುದು ಮಾನಹಾನಿಯಾಗುತ್ತದೆ. ನಾರದ ಸ್ಮøತಿ ಪ್ರಕಾರ ಪತಿತರನ್ನು, ಜಾತಿ ಭ್ರಷ್ಟರನ್ನು ಮತ್ತು ಕಳ್ಳರನ್ನು ದೂಷಿಸುವುದೂ ಮಾನಹಾನಿಯಾಗುತ್ತದೆ. ಈ ಸ್ಮøತಿಕಾರರ ದೃಷ್ಟಿಯಲ್ಲಿ ಮಾನಹಾನಿ ಅಸತ್ಯಪೂರಿತ ಹೇಳಿಕೆಯಿಂದಲೇ ಬರಬೇಕೆಂದಿಲ್ಲ. ನೈಜದೋಷಾರೋಷಣೆಯೂ ಕೂಡ ಕೆಲವು ಸಂದರ್ಭದಲ್ಲಿ ಮಾನಹಾನಿಗೈಯುತ್ತದೆ. ಮಾನಹಾನಿಗೆ ಈ ಸ್ಮøತಿಕಾರರು ದಂಡ ಶುಲ್ಕದಿಂದ ತೀವ್ರ ದೈಹಿಕ ಶಿಕ್ಷೆಯವರೆಗೂ ಶಿಕ್ಷೆ ವಿಧಿಸತಕ್ಕದೆಂದು ಹೇಳುತ್ತಾರೆ.

ಪ್ರಾಚೀನ ಗ್ರೀಕ್ ನ್ಯಾಯ ಪದ್ಧತಿಯಲ್ಲಿ ಬಾಯಿ ಮಾತುಗಳ ಮೂಲಕ ಮಾನಹಾನಿಯನ್ನುಂಟು ಮಾಡಿದರೆ ದಂಡಶುಲ್ಕ ವಿಧಿಸುತ್ತಿದ್ದರು. ರೋಮನ್ ನ್ಯಾಯ ಪದ್ಧತಿಯಲ್ಲಿ ಮಾನಹಾನಿ ಕುರಿತ ಸುಧಾರಣಾತ್ಮಕ ಬದಲಾವಣೆಗಳಾದುವು. ರೋಮನ್ನರು ಲಿಖಿತ ಮಾನಹಾನಿ ಮತ್ತು ಮೌಖಿಕ ಮಾನಹಾನಿಗಳ ನಡುವೆ ವ್ಯತ್ಯಾಸ ಕಂಡುಕೊಂಡರು. ಲೇಖನ, ಚಿತ್ರ ಮತ್ತಿತರ ಮಾಧ್ಯಮಗಳ ಮೂಲಕ ಖಾಸಗಿ ವ್ಯಕ್ತಿಗಳನ್ನು ಜನನಿಂದನೆಗೆ ಗುರಿಪಡಿಸುವುದೇ ಲಿಖಿತ ಮಾನಹಾನಿ. ಈ ಅಪರಾಧಕ್ಕೆ ಮರಣದಂಡನೆಯಂಥ ತೀವ್ರ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಮೌತಾಖಿ ಮಾನಹಾನಿಗೆ ಶಿಕ್ಷೆ ವಿಧಿಸಲು ಅದು ನಿಂದನಾತ್ಮಕವೂ ಸಾರ್ವಜನಿಕವಾಗಿ ಹೇಳಿದ್ದರಿಂದ ಸಾರ್ವಜನಿಕ ಶಾಂತಿಗೆ ಭಂಗ ತರುವಂಥದೂ ಆಗಿರಬೇಕೆಂದು ತಿಳಿಯಲಾಗಿತ್ತು.

ರೋಮನ್ ನ್ಯಾಯಪದ್ಧತಿಯ ಮೂಲತತ್ತ್ವಗಳನ್ನಾಧರಿಸಿ ಬೆಳೆದ ಆಂಗ್ಲೂ ಸ್ಯಾಕ್ಷನ್ ನ್ಯಾಯಪದ್ಧತಿಯಲ್ಲಿ ಕೂಡ ಲಿಖಿತ (ಲೈಬಲ್) ಮತ್ತು ಮೌಖಿಕ (ಸ್ಲಾಂಡರ್) ಮಾನಹಾನಿಗಳ ಕುರಿತು ಸ್ಪಷ್ಟಧೋರಣೆಗಳನ್ನು ಕಾಣಬಹುದು. ಇಂಗ್ಲೆಂಡ್‍ನಲ್ಲಿ 10ನೆಯ ಶತಮಾನದಲ್ಲಿ ಮೌಖಿಕ ಮಾನಹಾನಿಗೆ ಮರಣ ದಂಡನೆ ಅಥವಾ ನಾಲಗೆ ತುಂಡರಿಸುವಿಕೆಯ ತೀವ್ರ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು. ಮೂರನೆಯ ಹೆನ್ರಿಯ ಆಡಳಿತದಲ್ಲಿ (13ನೆಯ ಶತಮಾನ) ಲಿಖಿತ ಮಾನಹಾನಿಗೂ ಶಿಕ್ಷೆ ವಿಧಿಸುವ ಪದ್ಧತಿ ಬೆಳೆದು ಬಂದಿತು. 14ನೆಯ ಶತಮಾನದ ಆದಿಯಲ್ಲಿ ಒಂದನೆಯ ಎಡ್ವರ್ಡ್ ಶಾಸನವೊಂದನ್ನು ಜಾರಿಗೊಳಿಸಿ ದೊರೆ ಮತ್ತು ಪ್ರಜೆಗಳ ನಡುವೆ ಅಹಿತ ಸಂಬಂಧವೇರ್ಪಡುವಂತೆ ಸುದ್ಧಿ ಹರಡುವವರಿಗೆ ಶಿಕ್ಷೆ ವಿಧಿಸುತ್ತಿದ್ದ. ಎರಡನೆಯ ರಿಚರ್ಡ್‍ನ ಆಳ್ವಿಕೆಯಲ್ಲಿ ಈ ಶಿಕ್ಷೆಯನ್ನು ರಾಜ ಮನೆತನದ ವ್ಯಕ್ತಿಗಳ ಪ್ರತಿಷ್ಠೆಯನ್ನು ಮಾತ್ರ ರಕ್ಷಿಸಿದುವು. ಆದ್ದರಿಂದ ಜನಸಾಮಾನ್ಯರ ಮಾನ ರಕ್ಷಣೆಗೆ ಧಾರ್ಮಿಕ ನ್ಯಾಯಾಲಯಗಳಿಗೆ ಅಧಿಕಾರವನ್ನೀಯಲಾಯಿತು. ಈ ಅಧಿಕಾರವನ್ನು ಮುಂದೆ ಸ್ಥಳೀಯ ನ್ಯಾಯಾಲಯಗಳಿಗೆ ಹಸ್ತಾಂತರಿಸಲಾಯಿತು. ಈ ನ್ಯಾಯಾಲಯಗಳು ಮಾನಹಾನಿಯಿಂದ ಆಸ್ತಿ ನಷ್ಟವಾದರೆ ಆ ಸಂದರ್ಭದಲ್ಲಿ ಮಾತ್ರ ಪರಿಹಾರವನ್ನೀಯುತ್ತಿದ್ದುವು. ಮುದ್ರಣ ಯಂತ್ರರ ಆವಿಷ್ಕಾರದೊಂದಿಗೆ ಲಿಖಿತ ಮಾನಹಾನಿಯ ಸಾಧ್ಯತೆಯೂ ಹೆಚ್ಚಿತು. 16ನೆಯ ಶತಮಾನದಲ್ಲಿ ಸಾಮಾನ್ಯ ಕಾನೂನು (ಕಾಮನ್ ಲಾ) ಮಾನಹಾನಿಗೆ ಗುರಿಯಾದ ವ್ಯಕ್ತಿಗೆ ಪರಿಹಾರಧನ ಕೊಡಬೇಕೆಂದು ಮನ್ನಿಸಿತು ಹಾಗೂ ಮಾನಹಾನಿಯ ಮೂರು ಅಂಶಗಳನ್ನು ಗುರುತಿಸಿತು. ಒಂದನೆಯದಾಗಿ ಮಾನಹಾನಿಯನ್ನುಂಟುಮಾಡುವ ವಿಷಯ ಮೂರನೆಯ ವ್ಯಕ್ತಿಗಳಿಗೆ ತಿಳಿದಿರುವಂತಿರಬೇಕು. ಎರಡನೆಯದಾಗಿ ಪ್ರಕಟಿತ ವಿಷಯ ಅಸತ್ಯವಾಗಿರಬೇಕು. ಸತ್ಯ ಪ್ರಕಟಣೆ ಮಾನಹಾನಿಯಲ್ಲ. ಮೂರನೆಯದಾಗಿ ಅಪಮಾನಿತ ವ್ಯಕ್ತಿಯ ಮರಣಾನಂತರ ಮಾನಹಾನಿಯ ದಾವೆ ನಿಲ್ಲತಕ್ಕದಲ್ಲ. ಮೌಖಿಕ ಮಾನಹಾನಿಯಿಂದ ಆರ್ಥಿಕ ನಷ್ಟವಾದಾಗ ಮಾತ್ರ ಪರಿಹಾರ ದಾವೆ ಸಫಲವಾಗುತ್ತಿತ್ತು. ಹೀಗೆ ಒಂದೆಡೆ ಶಾಸನಗಳ ಮೂಲಕ ಮಾನಹಾನಿ ಅಪರಾಧಕ್ಕೆ ಶಿಕ್ಷೆ ವಿಧಿಸುವ ಪದ್ಧತಿ ಬೆಳೆದು ಬಂದಂತೆ ಇನ್ನೊಂದೆಡೆ ಸಾಮಾನ್ಯ ಕಾಯಿದೆ ನ್ಯಾಯಾಲಯಗಳು ಮಾನಹಾನಿಯನ್ನು ಅಪಕೃತ್ಯವೆಂದು ಪರಿಗಣಿಸಿ ಅಪಮಾನಿತನಿಗೆ ಅಪಮಾನಕಾರನಿಂದ ಪರಿಹಾರಧನ ಕೊಡಿಸುವ ಪದ್ಧತಿ ಬೆಳೆದುಬಂತು. ಮುಂದೆ ಇಂಗ್ಲಿಷ್ ಸಂಸತ್ತು ಹಲವಾರು ಶಾಸನಗಳನ್ನು ಮಾಡಿತು. 1792ರ ಫಾಕ್ಸನ ಲೈಬೆಲ್ ಶಾಸನ ಮಾನಹಾನಿಗೆ ಸಂಬಂಧಿಸಿದ ತೀರ್ಪು ಜ್ಯೂರಿ ನಿರ್ಣಯದ ಮೇಲೆ ಆಧರಿಸಿರಬೇಕೆಂದು ವಿಧಿಸಿತು. 1819ರ ಶಾಸನ ರಾಷ್ಟ್ರ ಮತ್ತು ಧರ್ಮದ್ರೋಹದ ಮಾನಹಾನಿ ಕೃತ್ಯಗಳಿಗೆ ಗಡೀಪಾರಿನ ಶಿಕ್ಷೆ ವಿಧಿಸಿತು. 1843 ಮತ್ತು 1845 ರ ಲೈಬೆಲ್ ಶಾಸನಗಳು ಲಿಖಿತ ಮಾನಹಾನಿಗಿರುವ ಅಪವಾದವನ್ನು ಗುರುತಿಸಿದುವು. 1855ರಲ್ಲಿ ಮಾನಹಾನಿಯ ನಿರ್ಣಯವನ್ನು ಕುರಿತು ಧಾರ್ಮಿಕ ನ್ಯಾಯಾಲಯಗಳಿಗೆ ಯಾವ ಅಧಿಕಾರವೂ ಇಲ್ಲವೆಂದು ವಿಧಿಸಲಾಯಿತು. 1891ರಲ್ಲಿ ಮಹಿಳಾ ಮೌಖಿಕ ಮಾನಹಾನಿ ಶಾಸನವನ್ನು ಸ್ಲಾಂಡರ್ ಆಫ್ ವಿಮೆನ್ ಆಕ್ಟ್ ಜಾರಿಗೊಳಿಸಿ ಸ್ತ್ರೀಯರ ಶೀಲ ಪಾವಿತ್ರ್ಯ ಕುರಿತ ಯಾವುದೇ ಮೌಖಿಕ ಮಾನಹಾನಿ ಆರ್ಥಿಕಹಾನಿ ಉಂಟುಮಾಡದಿದ್ದರೂ ಕೂಡ ಪರಿಹಾರಕ್ಕೆ ಅರ್ಹವೆಂದು ವಿಧಿಸಲಾಯಿತು. 1952ರಲ್ಲಿ ಪೋರ್ಟರ್ ಅಯೋಗದ ವರದಿ ಆಧಾರದ ಮೇಲೆ ಮಾನಹಾನಿ ಶಾಸನವನ್ನು ಮಾಡಲಾಯಿತು. ಮಾನಹಾನಿಯ ವಿಧಾನಗಳು ಅವುಗಳಿಗಿರುವ ಅಪವಾದಗಳು ವಾರ್ತಾ ಪತ್ರಿಕೆಗಳಿಗಿರುವ ಸೀಮಿತ ಸೌಲಭ್ಯ ಮತ್ತು ಹಕ್ಕುಗಳು ಅಯೋಜಿತ ಮಾನಹಾನಿಗಿರುವ ಪರಿಹಾರ ಇವುಗಳ ಕುರಿತು ವಿವರಿಸಲಾಯಿತು.

ಐತಿಹಾಸಿಕ ಕಾರಣಗಳಿಂದಾಗಿ ಭಾರತದಲ್ಲೂ ಬ್ರಿಟಿಷ್ ನ್ಯಾಯಪದ್ಧತಿಯನ್ನು ಅನುಸರಿಸಲಾಯಿತು. ಬ್ರಿಟಿಷರ ಸಾಮಾನ್ಯ ಕಾನೂನಿನ ಮೂಲತತ್ತ್ವಗಳನ್ನು ಅವಲಂಬಿಸಿ ಭಾರತೀಯ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಿಕೊಂಡ ಮಾನನಷ್ಟ ಕುರಿತ ಸಿವಿಲ್ ಕಾನೂನು ಬೆಳೆಯಿತು. 1860ರಲ್ಲಿ ಜಾರಿಗೊಳಿಸಲಾದ ಭಾರತೀಯ ದಂಡ ಸಂಹಿತೆಯಲ್ಲಿ ಮಾನನಷ್ಟದ ಅಪರಾಧವನ್ನು ವ್ಯಾಖ್ಯಾನಿಸಿ ಅಂಥ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

ಮಾನನಷ್ಟದ ಸಿವಿಲ್ ಕಾನೂನು: ಒಬ್ಬ ವ್ಯಕ್ತಿಯನ್ನು ಕುರಿತಂತೆ ಯಾವುದೇ ಹೇಳಿಕೆ ಇತರರ ದ್ವೇಷಕ್ಕೆ, ತಿರಸ್ಕಾರಕ್ಕೆ ಅಥವಾ ಅಪಹಾಸ್ಯಕ್ಕೆ ಗುರಿಪಡಿಸಿದಲ್ಲಿ ಅಥವಾ ಅವನ ವ್ಯಾಪಾರ, ವಾಣಿಜ್ಯ ಉದ್ಯೋಗ ಅಥವಾ ಕೆಲಸಗಳಿಗೆ ಧಕ್ಕೆಯುಂಟು ವಾಡಿದಲ್ಲಿ ಅಥವಾ ಸಮಾಜ ಅವನನ್ನು ದೂರವಿಡುವಂತೆ ಮಾಡಿದಲ್ಲಿ ಅದು ಮಾನನಷ್ಟಗೊಳಿಸುವ ಹೇಳಿಕೆಯಾಗುತ್ತದೆ. ವಿನಾಯಿತಿಗೊಳಪಟ್ಟ ಸಂದರ್ಭಗಳನ್ನು ಬಿಟ್ಟು ಮಿಕ್ಕ ಸನ್ನಿವೇಶಗಳಲ್ಲಿ ಅಪಮಾನಿತನಿಗೆ ಪರಿಹಾರ ಕೇಳುವ ಹಕ್ಕು ಇರುತ್ತದೆ ಮತ್ತು ಮಾನನಷ್ಟ ಹೇಳಿಕೆಗಳು ಅಥವಾ ಕೃತ್ಯಮುಂದುವರಿಯದಂತೆ ತಡೆ ಆಜ್ಞೆ ಪಡೆಯುವ ಹಕ್ಕು ಇರುತ್ತದೆ.

ಮಾನಹಾನಿಯ ಸಂದರ್ಭಗಳಲ್ಲಿ ಲಿಖಿತ ಮಾನಹಾನಿ ಸ್ವಯಂ ವೇದ್ಯವಾಗಿದ್ದು ಅಪಮಾನಿತನಿಗೆ ನಷ್ಟವಾಗಿರುವುದನ್ನು ರುಜುವಾತುಪಡಿಸಬೇಕಾಗುವುದಿಲ್ಲ, ಆದರೆ ಮೌಖಿಕ ಮಾನಹಾನಿ ಸಂದರ್ಭದಲ್ಲಿ ವ್ಯಕ್ತಿ ತನಗೆ ನಷ್ಟವಾಗಿರುವುದನ್ನು ರುಜುವಾತುಪಡಿಸಬೇಕಾಗುತ್ತದೆ. ಮಾನನಷ್ಟ ಪರಿಹಾರ ದಾವೆ ಸಫಲವಾಗಬೇಕಿದ್ದರೆ ಅಪಾದಿತ ಹೇಳಿಕೆ ಸುಳ್ಳೆಂದೂ ಮಾನಹಾನಿಕಾರಕವೆಂದೂ ಮತ್ತು ಪ್ರಕಟವಾಗಿದೆಯೆಂದೂ ಅಪಮಾನಿತ ಸಾಧಿಸಬೇಕಾಗುತ್ತದೆ. ಒಂದು ಹೇಳಿಕೆ ಮಾನಹಾನಿಕಾರಕವೇ ಎನ್ನುವುದಕ್ಕೆ ಆ ಹೇಳಿಕೆ ಸಮಾಜದ ಸರ್ವಸಾಧಾರಣ ಸದಸ್ಯರ ಅಂದಾಜಿನಲ್ಲಿ ವಾದಿಯ ಗಣ್ಯತೆಗೆ ಧಕ್ಕೆ ತಂದಿದೆಯೆ ಎಂಬ ಪರೀಕ್ಷೆಯನ್ನು ನ್ಯಾಯಾಲಯ ಒಡ್ಡುತ್ತದೆ. ವಾದಿ ಮಾನಹಾನಿಕಾರಕ ಹೇಳಿಕೆ ತನಗೇ ಸಂಬಂಧಿಸಿರುವುದನ್ನು ಸಾಧಿಸಬೇಕಾಗುತ್ತದೆ. ಅಂಥ ಹೇಳಿಕೆ ವಾದಿಯ ಹೆಸರನ್ನು ಸೂಚಿಸದೆ ಬೇರೆ ವಿವರಣೆಗಳ ಮೂಲಕ ಅವನಿಗೆ ಗುರಿಯಿಟ್ಟಿದ್ದರೂ ಅದು ಅವನನ್ನು ಸೂಚಿಸಿದಂತೆಯೇ, ಕೆಲವು ಸಂದರ್ಭದಲ್ಲಿ ಹೇಳಿಕೆ ಶಬ್ದಗಳ ಸ್ವಾಭಾವಿಕವಾಗಿ ಅರ್ಥ ಮೇಲ್ನೋಟಕ್ಕೆ ಮಾನಹಾನಿಕಾರಕವೆಂದು ಕಂಡಿತು. ಮತ್ತೆ ಕೆಲವು ಸಂದರ್ಭಗಳಲ್ಲಿ ಮಾನಹಾನಿಕಾರಕ ಹೇಳಿಕೆಯಲ್ಲಿ ಉಪಯೋಗಿಸಿದ ಶಬ್ದಗಳು ಮೇಲೋಟಕ್ಕೆ ನಿಷ್ಕಪಟವೆಂದು ತೋರುವುದಾದರೂ ಅದರ ಗೂಡಾರ್ಥ ಮತ್ತು ವ್ಯಂಗ್ಯದ ತಿವಿತಗಳು ಪರೀಕ್ಷಿಸಿದ ಮೇಲೆ ತಿಳಿದೀತು. ಇಂಥ ಸಂದರ್ಭಗಳಲ್ಲಿ ವಾದಿ ಇದರ ವಿವರಣೆಯನ್ನು ಕೊಡಬೇಕಾಗುತ್ತದೆ.

ಮೃತ ವ್ಯಕ್ತಿಗಳ ಮಾನಹಾನಿ ಸಿವಿಲ್ ದಾವೆಗೆ ಒಳಪಡುವುದಿಲ್ಲ. ಒಂದು ವರ್ಗವನ್ನೇ ಮಾನಹಾನಿಗೀಡು ಮಾಡುವ ಹೇಳಿಕೆ ಕೂಡ ಸಿವಿಲ್ ದಾವೆಯ ವಿಷಯವಾಗುವುದಿಲ್ಲ. ವ್ಯಾಪಾರ ಸಂಸ್ಥೆಗಳು ನಿಗಮಗಳು ಮುಂತಾದ ಒಕ್ಕೂಟಗಳಿಗೆ ಮಾನಹಾನಿಗೈದಲ್ಲಿ ಅವುಗಳ ವ್ಯಾಪಾರ ವಹಿವಾಟುಗಳಿಗೆ ಧಕ್ಕೆ ತಂದಲ್ಲಿ ಮಾತ್ರ ಪರಿಹಾರ ಕೇಳಬಹುದು.

ಮಾನಹಾನಿ ಹೇಳಿಕೆಗಳು ಮೂರನೆಯ ವ್ಯಕ್ತಿಗಳಿಗೆ ತಿಳಿದಾಗ ಮತ್ತು ಪ್ರಕಟಗೊಂಡಾಗ ಮಾತ್ರ ಮಾನಹಾನಿ ಪರಿಹಾರಕ್ಕೆ ಹೊಣೆಯಾಗುತ್ತವೆ. ಪ್ರಕಟಗೊಳ್ಳುವ ಮಾಧ್ಯಮ ಯಾವುದಾದರೂ ಸರಿ, ಬಾಯಿ ಮಾತು ಲೇಖನ, ಚಿತ್ರ, ಶಿಲ್ಪ, ವ್ಯಂಗ್ಯಚಿತ್ರ, ಸಿನಿಮಾ, ದಾಖಲಿತ ಸಂಭಾಷಣೆ, ತಾರು, ರೇಡಿಯೊ, ಪ್ರಸಾರ ಸುದ್ದಿ ಮತ್ತು ಪತ್ರಿಕೆಗಳು ಇತ್ಯಾದಿ ಯಾವ ಮಾಧ್ಯಮದಲ್ಲಾದರೂ ಪ್ರಕಟಗೊಂಡಿದ್ದರೆ ಸಾಕು. ಅಪಮಾನಿತ ವ್ಯಕ್ತಿಯನ್ನು ತಿಳಿದ ಕೆಲವು ವ್ಯಕ್ತಿಗಳಿಗೆ ಗೊತ್ತಾದರೆ ಸಾಕು ಅಪಾದಿತ ಹೇಳಿಕೆ ಎಲ್ಲರಿಗೂ ತಿಳಿಯಬೇಕೆಂದೇನೂ ಇಲ್ಲ.

ಬರಿಯ ಮೌಖಿಕ ಮಾನಹಾನಿ ಕುರಿತು ಸಿವಿಲ್ ದಾವೆ ನಿಲ್ಲದು. ಮೌಖಿಕ ಮಾನಹಾನಿಯಿಂದ ವಿಶೇಷ ನಷ್ಟವಾಗಿದ್ದರೆ ಮಾತ್ರ ಅದು ಸಫಲವಾದೀತು, ಉದಾಹರಣೆಗೆ ಮೌಖಿಕ ಮಾನಹಾನಿಯ ಸ್ವಾಭಾವಿಕ ಪರಿಣಾಮವಾಗಿ ಅಪಮಾನಿತ ಗಿರಾಕಿಗಳನ್ನು ಕಳೆದುಕೊಂಡಿದ್ದರೆ, ಉದ್ಯೋಗ ಅಥವಾ ಆದರೆ ಸಾಧ್ಯತೆಯನ್ನೂ ಕಳೆದುಕೊಂಡಿದ್ದರೆ ಅಥವಾ ಸತಿಪತಿಯರ ಸಂಬಂಧಕ್ಕೆ ಊನವಾಗಿದ್ದರೆ ಮೌಖಿಕ ಮಾನಹಾನಿ ಪರಿಹಾರ ಯೋಗ್ಯವೆನ್ನಿಸುವುದು. ಕ್ರಿಮಿನಲ್ ಅಪರಾಧದ ಆರೋಪ ಹೊರಿಸುವುದು ಅಂಟುರೋಗದಿಂದ ಬಳಲುತ್ತಿದ್ದಾನೆಂದು ಸುದ್ದಿ ಹಬ್ಬಿಸಿ ಸಮಾಜ ವ್ಯಕ್ತಿಯನ್ನು ದೂರೀಕರಿಸುವಂತೆ ಮಾಡುವುದು. ವ್ಯಕ್ತಿಯ ವ್ಯಾಪಾರ ವಹಿವಾಟು, ಉದ್ಯೋಗ ಮತ್ತು ಸ್ಥಾನಗಳಿಗೆ ಧಕ್ಕೆ ತರುವಂಥ ದುರ್ನಡತೆ ಅಥವಾ ಅಯೋಗ್ಯತೆಯ ಆರೋಪ ಮಾಡುವುದು, ಹೆಂಗಸಾಗಿದ್ದಲ್ಲಿ ಶೀಲ ಕೆಟ್ಟವಳೆಂದು ಆರೋಪಿಸುವುದು ಈ ಬಗೆಯ ಮೌಖಿಕ ಮಾನಹಾನಿ ಮೇಲೆ ಪರಿಹಾರ ದಾವೆ ಜರುಗಿಸಬಹುದು. ಭಾರತದಲ್ಲಿ ಈ ಸಂದರ್ಭಗಳಲ್ಲಿದೆ. ಕೆಟ್ಟ ಶಬ್ದಗಳಿಂದ ಬಯ್ಯುವುದೂ ಜಾತಿ ಭ್ರಷ್ಟರೆಂದು ಆರೋಪಿಸುವುದೂ ಮೌಖಿಕ ಮಾನಹಾನಿಯೆಂದು ಪರಿಗಣಿಸಲಾಗಿದೆ.

ಮಾನನಷ್ಟದ ಹೊಣೆಗಾರಿಕೆಗೆ ಕೆಲವು ಅಪವಾದಗಳಿವೆ. ಮಾನಹಾನಿ ಹೇಳಿಕೆ ಸತ್ಯವೂ ಸರಿಯೂ ಆಗಿದ್ದಾಗ ಹೊಣೆಗಾರಿಕೆಯನ್ನು ಇಲ್ಲವಾಗಿಸುವುದು. ತನಗಿಲ್ಲದ ಉನ್ನತ ಮಾನ ಮತ್ತು ಪ್ರತಿಷ್ಠೆ ನಷ್ಟವಾಯಿತೆಂಬ ವ್ಯಕ್ತಿಯ ಆಕ್ಷೇಪವನ್ನು ಕಾನೂನು ಮನ್ನಿಸುವುದಿಲ್ಲ. ರಾಜಕಾರಣ, ನ್ಯಾಯದಾನ, ಸಾರ್ವಜನಿಕ ಸಂಸ್ಥೆಗಳು, ಧಾರ್ಮಿಕ ವಿಷಯಗಳು, ಪುಸ್ತಕ, ಸಿನಿಮಾ, ನಾಟಕ ಮತ್ತು ಕಲೆ ಇತ್ಯಾದಿ ಸಾರ್ವಜನಿಕ ಹಿತಾಸಕ್ತಿಯುಳ್ಳ ವಿಷಯಗಳನ್ನು ಕುರಿತು ಸದುದ್ದೇಶದಿಂದ ಮಾಡಿದ ಪ್ರಾಮಾಣಿಕ ಮತ್ತು ಸಾಂದರ್ಭಿಕ ಟೀಕೆ ಅಥವಾ ವಿಮರ್ಶೆಗಳು ಮಾನಹಾನಿಗೈಯಲಾರವು. ಕೆಲವು ವ್ಯಕ್ತಿಗಳಿಗೆ ಅಧಿಕಾರ ಮತ್ತು ಕರ್ತವ್ಯ ನಿರ್ವಹಣೆಗಾಗಿ ಕೊಟ್ಟ ವಿಶೇಷಾಧಿಕಾರಗಳು ಅವರನ್ನು ಮಾನನಷ್ಟದ ಹೊಣೆಗಾರಿಕೆಯಿಂದ ರಕ್ಷಿಸುತ್ತವೆ. ಸಂವಿಧಾನದಲ್ಲಿ ಶಾಸನಸಭೆ ಮತ್ತು ರಾಜ್ಯ ಶಾಸಕಾಂಗಗಳಿಗೆ ಕೊಡಲಾದ ವಿಶೇಷಾಧಿಕಾರಗಳನ್ನು ಬಳಸಿ ನೀಡಿದ ಹೇಳಿಕೆಗಳು ಮತ್ತು ಮಾಡಿದ ವರದಿಗಳು ಮಾನಹಾನಿಯ ಹೊಣೆಯಿಂದ ಮುಕ್ತವಾಗಿರುತ್ತವೆ. ನ್ಯಾಯಸ್ಥಾನ ಕಲಾಪಗಳು, ಮಿಲಿಟರಿ ಮತ್ತು ನಾವಿಕ ಪಡೆಯ ಕಲಾಪಗಳು ಹಾಗೂ ಆಡಳಿತ ಕಲಾಪಗಳಲ್ಲಿ ನೀಡಿದ ಹೇಳಿಕೆಗಳು ವರದಿಗಳು ಮಾನಹಾನಿಗೈಯುವುದಿಲ್ಲ. ಇವುಗಳು ಅಸೀಮಿತ ವಿಶೇಷಾಧಿಕಾರಗಳಾದರೆ, ಸೀಮಿತ ವಿಶೇಷಾಧಿಕಾರಗಳು ಈ ಕೆಳಗಿನ ಸಂದರ್ಭಗಳಲ್ಲಿ ಬರುತ್ತವೆ. ಕಾನೂನುಬದ್ಧ ನೈತಿಕ ಅಥವಾ ಸಾಮಾಜಿಕ ಕರ್ತವ್ಯ ನೆರವೇರಿಸುವ ಕಾರ್ಯದಲ್ಲಿ ಸತ್ಯವೆಂದು ನಂಬಿದಂಥ ಹೇಳಿಕೆಯಾಗಿದ್ದಲ್ಲಿ ಅದು ಮಾನಹಾನಿಯಾಗುವುದಿಲ್ಲ. ಸಾರ್ವಜನಿಕ ಅಧಿಕಾರಿ ತನ್ನ ಶೋಧನಾ ಕಾರ್ಯದಲ್ಲಿ ಮಾಡಿದ ಹೇಳಿಕೆಗಳು, ಸೇವಕನ ನಡತೆಯ ಕುರಿತು ಸಮಾಜದ ಹಿತಕ್ಕಾಗಿ ಯಜಮಾನ ಕೊಟ್ಟ ಹೇಳಿಕೆಗಳು, ಖಾಸಗಿ ಸ್ವರೂಪದ ಗುಪ್ತ ಸುದ್ದಿ ವಿನಿಮಯಗಳು, ಸ್ವಂತ ಹಿತರಕ್ಷಣೆಗಾಗಿ ನೀಡಿದ ಹೇಳಿಕೆಗಳು ಸಮಾನ ಹಿತಾಸಕ್ತಿಗಳನ್ನು ರಕ್ಷಿಸಲು ಮಾಡಿದ ಪ್ರಾಮಾಣಿಕ ಹೇಳಿಕೆಗಳು ಸಾರ್ವಜನಿಕ ಹುದ್ದೆಯಲ್ಲಿರುವ ಅಧಿಕಾರಿ ಸಾರ್ವಜನಿಕ ಒಳಿತಿನ ದೃಷ್ಟಿಯಿಂದ ಕೊಟ್ಟ ಹೇಳಿಕೆಗಳು ಅಥವಾ ನಿವೇದನೆಗಳು ನ್ಯಾಯಾಲಯ, ಸಂಸತ್ತು ಮತ್ತು ಸಾರ್ವಜನಿಕ ಸಭೆಗಳ ಕಲಾಪದ ಯಥಾವತ್ತಾದ ನಿಷ್ಪಕ್ಷಪಾತ ವರದಿಗಳು ಮಾನಹಾನಿಗೈಯುವುದಿಲ್ಲ. ಮೇಲಿನ ಹೇಳಿಕೆಗಳು ಸಮಾಜದ ಒಳಿತಿಗಾಗಿ ಮತ್ತು ಪ್ರಾಮಾಣಿಕವೆಂದಾಗಿರುವುದರಿಂದ ಇವುಗಳು ಸೀಮಿತ ರಕ್ಷಣೆ ಮಾತ್ರ ಒದಗಿಸುತ್ತವೆ. ಅಪಮಾನಿತ ಒಪ್ಪುವಂತೆ ಅಪಮಾನ ಮಾಡಿದಾತ ಬಹಿರಂಗವಾಗಿ ಕ್ಷಮೆ ಯಾಚಿಸಿದಾಗ ಕೂಡ ಮಾನಹಾನಿಯಾಗುವುದಿಲ್ಲ.

ಮಾನನಷ್ಟ ಕುರಿತ ಕ್ರಿಮಿನಲ್ ಕಾನೂನು. 1860ರಲ್ಲಿ ಜಾರಿಗೊಳಿಸಲಾದ ಭಾರತೀಯ ದಂಡಸಂಹಿತೆಯ 499 ಕಲಮಿನಲ್ಲಿ ಮಾನನಷ್ಟ ಅಪರಾಧ ಕುರಿತು ವ್ಯಾಖ್ಯಾನವಿದೆ. ಇದರ ಪ್ರಕಾರ ಒಬ್ಬ ವ್ಯಕ್ತಿ ಬಾಯಿ ಮಾತಿನ ಮೂಲಕ, ಬರೆಹ ಮತ್ತು ಸಂಜ್ಞೆ ಅಥವಾ ದೃಶ್ಯ ರೂಪದಲ್ಲಿ ಇನ್ನೊಬ್ಬ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶದಿಂದ ಅಥವಾ ತಾನು ಮಾಡುವ ಕ್ರಿಯೆ ಹಾನಿಮಾಡೀತೆಂಬ ಜ್ಞಾನದಿಂದ ದೋಷಾರೋಪಣೆ ಮಾಡಿದರೆ ಅಥವಾ ಪ್ರಕಟಿಸಿದರೆ, ವಿನಾಯಿತಿಗೊಳಿಸಿದ ಸಂದರ್ಭಗಳನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ಮಾನನಷ್ಟ ಮಾಡಿದನೆಂದು ಅರ್ಥ. ಮೃತವ್ಯಕ್ತಿ ಕುರಿತು ಮಾಡಿದ ದೋಷಾರೋಪಣೆ ಅವನ ಜೀವಿತ ಕಾಲದಲ್ಲಾಗಿದ್ದರೆ ಮಾನನಷ್ಟವೆನಿಸುವಲ್ಲಿ ಆ ಮೃತ ವ್ಯಕ್ತಿಯ ಸಂಬಂಧಿಗಳ ಭಾವನೆಗೆ ನೋವು ಉಂಟುಮಾಡಿದರೆ ಮಾನನಷ್ಟವಾಗುತ್ತದೆ. ಸಂಸ್ಥೆ, ನಿಗಮ ಮುಂತಾದವುಗಳ ಮೇಲೆ ಮಾಡಿದ ದೋಷಾರೋಪಣೆ ಮೇಲಿನ ವ್ಯಾಖ್ಯಾನದಡಿಯಲ್ಲಿ ಮಾನನಷ್ಟಕ್ಕೆ ಎಡೆಮಾಡುತ್ತದೆ. ವ್ಯಂಗ್ಯಾರ್ಥದಿಂದ ಕೂಡಿದ ಹೇಳಿಕೆಗಳು ಕೆಲವು ಸಂದರ್ಭದಲ್ಲಿ ಮಾನನಷ್ಟವನ್ನುಂಟುಮಾಡುತ್ತವೆ.

ಈ ಕೆಲವು ಸಂದರ್ಭಗಳಲ್ಲಿ ಹೇಳಿಕೆಗಳನ್ನು ಮಾನಹಾನಿಕಾರಕವೆಂದು ಪರಿಗಣಿಸುವುದಿಲ್ಲ. ಸಾರ್ವಜನಿಕ ಒಳಿತಿಗಾಗಿ ಸತ್ಯ ಹೇಳಿದಾಗ, ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಂಬಂಧಿಸಿದವರು ತೋರಿದ ವರ್ತನೆ ಕುರಿತು ಜಾಗರೂಕವಾಗಿ ಮಾಡಿದಂಥ ಹೇಳಿಕೆಗಳು, ಒಬ್ಬ ವ್ಯಕ್ತಿಯ ಸಾರ್ವಜನಿಕ ಪ್ರಶ್ನೆಯೊಂದಕ್ಕೆ ಸಂಬಂಧಿಸಿದವರು ತೋರುವ ವರ್ತನೆ ಕುರಿತು ಮಾಡಿದ ಜಾಗರೂಕ ಹೇಳಿಕೆಗಳು, ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಕೊಟ್ಟ ತೀರ್ಪನ್ನು ಕುರಿತು ಅಥವಾ ಸಾಕ್ಷಿದಾರರ, ಪ್ರತಿನಿಧಿಯ ಕಕ್ಷಿದಾರರ ವರ್ತನೆ ಕುರಿತು ಜಾಗರೂಕವಾಗಿ ಕೊಟ್ಟ ಹೇಳಿಕೆಗಳು ಸಾರ್ವಜನಿಕರ ತೀರ್ಪಿಗೊಳಪಡುವಂತೆ ಪ್ರಕಟಿಸಿದ ಯಾವುದೇ ಕೃತಿಯನ್ನು (ಪುಸ್ತಕ, ಭಾಷಣ, ಲಲಿತಕಲೆಗಳು) ಕುರಿತು ಸಾರ್ವಜನಿಕರು ಮಾಡಿದ ಹೇಳಿಕೆಗಳು, ಕಾನೂನಿನಿಂದ ದತ್ತವಾದ ಅಥವಾ ಕಾನೂನುಬದ್ಧ ಒಪ್ಪಂದದಿಂದ ದತ್ತವಾದ ಅಧಿಕಾರವನ್ನು ಉಪಯೋಗಿಸಿ ಜಾಗರೂಕವಾಗಿ ಕ್ರಮಕೈಗೊಳ್ಳುವುದು, ಕಾನೂನುಬದ್ಧ ಅಧಿಕಾರವಿರುವವರಿಗೆ ಅವರ ಕೈಕೆಳಗಿನವರನ್ನು ಕುರಿತು ದೂರು ಹೇಳುವುದು ಮತ್ತು ತನ್ನ ಹಿತಾಸಕ್ತಿ ರಕ್ಷಣೆಗಾಗಿ ಅಥವಾ ಇತರರ ಒಳಿತಿಗಾಗಿ ಅಥವಾ ಸಾರ್ವಜನಿಕ ಲಾಭಕ್ಕಾಗಿ ಇನ್ನೊಬ್ಬ ವ್ಯಕ್ತಿಯ ಮೇಲೆ ಮಾಡಿದ ದೋಷಾರೋಪಣೆ-ಇವು ಮಾನನಷ್ಟವಲ್ಲ. ಭಾರತೀಯ ದಂಡಸಂಹಿತೆಯ ಕಲಮು 500ರ ಪ್ರಕಾರ ಮಾನನಷ್ಟ ಗೈದ ವ್ಯಕ್ತಿಗೆ ಎರಡು ವರ್ಷದ ತನಕ ಸರಳ ಸೆರೆಮನೆವಾಸ ಅಥವಾ ದಂಡಶುಲ್ಕ ವಿಧಿಸುವಿಕೆ ಅಥವಾ ಅವೆರಡೂ ಶಿಕ್ಷೆ ವಿಧಿಸಬಹುದು. ಕಲಮು 501ರ ಪ್ರಕಾರ ತಾನು ಮಾಡಿದ ಕೃತಿಯು ಮಾನನಷ್ಟಗೈವುದೆಂಬ ಜ್ಞಾನವಿದ್ದು ಅಥವಾ ಹಾಗೆ ನಂಬಲು ಕಾರಣಗಳಿದ್ದು ಮಾನಹಾನಿಗೈವ ವಿಷಯವನ್ನು ಮುದ್ರಿಸುವ ಅಥವಾ ಬರೆಯುವ ಅಪರಾಧಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಕಲಮು 502ರಂತೆ ಮಾನಹಾನಿಗೈವ ವಸ್ತುವನ್ನು ಅದರ ಪೂರ್ಣ ಅರಿವಿದ್ದು ಮಾರುವ ಅಥವಾ ಮಾರಲು ಉದ್ಯುಕ್ತನಾದ ವ್ಯಕ್ತಿಗೆ ಶಿಕ್ಷೆ ವಿಧಿಸಬಹುದಾಗಿದೆ.

ಭಾರತೀಯ ಸಂವಿಧಾನದ 19ನೆಯ ವಿಧಿ 2ನೆಯ ಕಲುಮಿನ ಪ್ರಕಾರ ಭಾರತೀಯರಿಗೆ ಇರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು (12ನೆಯ ವಿಧಿಯಲ್ಲಿ ವ್ಯಾಖ್ಯಾನಿಸಿರುವಂತೆ) ಮಾನನಷ್ಟ ಗೈಯಲು ಉಪಯೋಗಿಸಿದರೆ ಈ ಸ್ವಾತಂತ್ರ್ಯವನ್ನು ನಿಯಂತ್ರಣಗೊಳಿಸುವ ಸಮಂಜಸ ಕಟ್ಟುಪಾಡುಗಳನ್ನು ಹೇರಬಹುದು. ಭಾರತೀಯ ಸಿವಿಲ್ ಮತ್ತು ಕ್ರಿಮಿನಲ್ ಕಾಯಿದೆಗಳು ಇಂಥ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತವೆಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಮಾನನಷ್ಟಗೈದೀತೆಂಬ ಸಂಶಯದಿಂದ ಯಾವುದೇ ಪ್ರಕಟಣೆಯನ್ನು ನಿಲ್ಲಿಸಲು ಆಜ್ಞೆ ಮಾಡಲಾಗದು; ಪ್ರಕಟಿಸಿರಿ ಮತ್ತು ಅದರ ಹೊಣೆಯನ್ನು ಹೊತ್ತುಕೊಳ್ಳಿ ಎಂಬುದೇ ಸರಿ ಎಂದು ತನ್ನ ನಿರ್ಣಯವೊಂದರಲ್ಲಿ (1983) ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಪ್ರತಿಷ್ಠೆ ಗೌರವಗಳನ್ನು ರಕ್ಷಿಸುವಲ್ಲಿ ಮಾನನಷ್ಟ ಪರಿಹಾರ ಕಾನೂನು ಸಹಕಾರಿಯೂ ಪ್ರಭಾವಪೂರ್ಣವೂ ಆಗಿದೆ.											
(ಪಿ.ಇ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ